ಒ’ಹಾರಾ, ಜೆ ಎಚ್ : 1905-70. ಅಮೆರಿಕದ ಕಾದಂಬರಿಕಾರ, ಪತ್ರಿಕೋದ್ಯಮಿ, ನಾಟಕಕಾರ, ಚಲನಚಿತ್ರ ಲೇಖಕ, ಸಣ್ಣಕಥೆಗಾರ ಮತ್ತು ವಿಮರ್ಶಕ, ಕೂಲಿಗಾರನಾಗಿ, ಉಕ್ಕಿನ ಕಾರ್ಖಾನೆಯಲ್ಲಿ ಕಾವಲುಗಾರನಾಗಿ, ಸೋಡಾ ಮಾರುವವನಾಗಿ, ವಿಹಾರಕೇಂದ್ರವೊಂದರ ರಕ್ಷಕನಾಗಿ, ಸುದ್ಧಿಗಾರನಾಗಿ, ಸಹಸಂಪಾದಕನಾಗಿ-ಹೀಗೆ ಬೇರೆ ಬೇರೆ ವೃತ್ತಿಗಳಲ್ಲಿ ಪಳಗಿದ. ಅಪಾಯಿಂಟ್ಮೆಂಟ್ ಇನ್ ಸಮಾರಾ ಕಾದಂಬರಿ ಪ್ರಕಟವಾದೊಡನೆ (1934) ಅಮೆರಿಕದಲ್ಲಿ ಈತನ ಕೀರ್ತಿ ಹರಡಿತು. ಅನಂತರ ಬಂದ ಡಾಕ್ಟರ್ಸ್‌ಸನ್ ಅಂಡ್ ಅದರ್ ಸ್ಟೋರೀಸ್ (1935) ಎಂಬ ಕಥಾಸಂಗ್ರಹ, ಬಟರ್ಫೀಲ್ಡ್‌ 8 ಎಂಬ ಕಾದಂಬರಿಗಳು ಸಾಹಿತ್ಯಕ್ಷೇತ್ರದಲ್ಲಿ ಇವನ ಸ್ಥಾನವನ್ನು ಭದ್ರಪಡಿಸಿದುವು. ಆಮೇಲೆ ಈತ ಪ್ರಮುಖ ಪತ್ರಿಕೆಯೊಂದಕ್ಕೆ ಫುಟ್ಬಾಲ್ ಪಂದ್ಯಗಳ ವಿವರಣೆ ಬರೆಯುವ ಕ್ರೀಡಾ ವಿಮರ್ಶಕನಾದ. ಗಟ್ಟಿಗಡಸು ಮೈಉಳ್ಳ ಈತ ಕುಸ್ತಿಯ ಅಂಗಣಕ್ಕೂ ಇಳಿದುದುಂಟು. ಹಾಲಿವುಡ್ಡಿನಲ್ಲಿ ಈತ ಚಿತ್ರಕಥೆ ಬರೆದು ಪ್ರಸಿದ್ಧನಾದ. ತನ್ನ ಕಾಲದ ಜನರ ಸಮಾಜದ ಬಗ್ಗೆ ಈತನಿಗಿದ್ದ ಅಪಾರ ಅರಿವು, ಅನುಕಂಪ, ತೀವ್ರ ಸಂವೇದನೆಗಳ ಜೊತೆಗೆ ಇವನ ಚಾಟಿಯಂಥ ಮಾತು, ಚುಚ್ಚುನುಡಿ, ಕಟು ವಿಮರ್ಶೆಗಳಿಂದಾಗಿ ಈತನ ಕೃತಿಗಳು ಜನಪ್ರಿಯವಾಗಿವೆ. ಪಾಲ್ ಜೋಯಿ (1940) ಟೆನ್ ನಾರ್ತ್ ಫ್ರೆಡರಿಕ್ (1955), ಸ್ವೀಟ್ ಅಂಡ್ ಸವರ್ (1954), ಸರ್ಮನ್ಸ್‌ ಎಂಡ್ ಸೋಡಾವಾಟರ್ (1961)-ಇವು ಈತನ ಪ್ರಮುಖ ಕೃತಿಗಳು.
ಈತನಿಗೆ ಬಣ್ಣಗುರುಡುತನ ಇದ್ದುದರಿಂದ ಈತನ ಕೃತಿಗಳಲ್ಲಿ ಬಿಳಿ ಮತ್ತು ಕಪ್ಪು ಬಣ್ಣಗಳನ್ನುಳಿದು ಬೇರೆ ಯಾವ ಬಣ್ಣಗಳ ವರ್ಣನೆಯೂ ಇಲ್ಲದಿರುವುದು ಒಂದು ವಿಚಿತ್ರ, ವೈಶಿಷ್ಟ್ಯ, ಹೂಗಳು, ಹಕ್ಕಿಗಳು ನಿಸರ್ಗ-ಇವುಗಳ ವರ್ಣನೆಗಳು ಇವನಲ್ಲಿ ಅಪುರ್ವ.	(ಎಸ್.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ